ಬೇಡ್ತಿ ನದಿ ಉಳಿಸುವ ಹೋರಾಟ ಆರಂಭದಲ್ಲಿ ಟೀಕೆಗಳನ್ನು ಎದುರಿಸಿತು. ಈಗ ವೈಜ್ಞಾನಿಕ ದತ್ತಾಂಶ, ಕಾನೂನು ಕ್ರಮ, ಮತ್ತು ಜನಸಹಭಾಗಿತ್ವದ ಮೂಲಕ ನದಿ ಜೋಡಣೆ ಯೋಜನೆಗಳನ್ನು ರದ್ದುಗೊಳಿಸುವತ್ತ ಸಾಗಬೇಕು. ಇದು ಕೇವಲ ಒಂದು ನದಿಯ ಹೋರಾಟವಲ್ಲ, ಬದಲಾಗಿ ಪಶ್ಚಿಮಘಟ್ಟದ ಪರಿಸರ ಮತ್ತು ಮುಂದಿನ ಪೀಳಿಗೆಗಾಗಿ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ನದಿಗಳನ್ನು ಉಳಿಸೋಣ, ಪರಿಸರವನ್ನು ರಕ್ಷಿಸೋಣ. ಜನರ ಬೆಂಬಲವಿಲ್ಲದೆ, ಸರ್ಕಾರದ ಯೋಜನೆಯ ವಿರುದ್ಧ, ಪ್ರಕೃತಿಯ ಪರವಾಗಿ ಧ್ವನಿ ಎತ್ತುವುದು ಇನ್ನೂ ಕಷ್ಟ. ಬೇಡ್ತಿ ನದಿ ಉಳಿಸುವ ಸತ್ಯಾಗ್ರಹ ಶುರುವಾದಾಗ ಜನರ ಪ್ರತಿಕ್ರಿಯೆ ಹಲವು ಬಗೆಯಾಗಿತ್ತು. “ಮಾಗೋಡು, ಕಾರವಾರ ಅಂತ ಎಲ್ಲೆಲ್ಲೋ ಸತ್ಯಾಗ್ರಹ ಮಾಡಿದರೆ ಸರ್ಕಾರದ ಕೆಲಸ ನಿಲ್ಲುತ್ತದೆಯೇ? ಆ ಅನಸೂಯಾ ಶರ್ಮಾಳಿಗೆ ಬೇರೆ ಕೆಲಸವಿಲ್ಲವೇ?