ವಿಟ್ಲ: ಮೂಲಸೌಕರ್ಯಗಳ ಕೊರತೆಯ ನೆಪ ಹೇಳಿ ರೋಗಿಗಳಿಗೆ ಸೇವೆ ನೀಡುವುದನ್ನು ಸ್ಥಗಿತಗೊಳಿಸಿದ್ದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ)ವನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲಾಗುತ್ತಿದೆ. ಆದರೂ ಆರೋಗ್ಯ ಕೇಂದ್ರ ಇನ್ನೂ ರೋಗಗ್ರಸ್ತ ಸ್ಥಿತಿಯಲ್ಲೇ ಇದ್ದು ಬಡ ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಮರೀಚಿಕೆಯಾಗುತ್ತಿದೆ. ಸವಲತ್ತುಗಳು ಇದ್ದರೂ ಇಲ್ಲವೆಂದು ಹೇಳುತ್ತ ರೋಗಿಗಳಿಗೆ ಸಮರ್ಪಕ ಸೇವೆ ನೀಡದಿರುವುದು, ಸಣ್ಣಪುಟ್ಟ ಪ್ರಕರಣಗಳಿಗೂ ದೂರದ ಪುತ್ತೂರು ಮತ್ತು ಮಂಗಳೂರಿಗೆ ರೋಗಿಗಳನ್ನು ವರ್ಗಾಯಿಸುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.