ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರೆಜಿಲ್ನ ಅಧ್ಯಕ್ಷೀಯ ಚುನಾವಣೆಯನ್ನು ಭಾರತದ ಚುನಾವಣೆ ಎಂದು ತಪ್ಪಾಗಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಸಂಗ ಸೋಮವಾರ ನಡೆದಿದೆ. ಇದು ಭಾರಿ ಟೀಕೆಗೆ ಗುರಿಯಾಗಿದೆ. ತಮ್ಮ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಡೊನಾಲ್ಡ್ ಟ್ರಂಪ್, ‘ಭಾರತದ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಇಂದು 12.5 ಕೋಟಿ ಜನರು ಮತ ಚಲಾಯಿಸಿದ್ದಾರೆ. ಮತದಾನ ಮುಗಿದ ತಕ್ಷಣವೇ, ಅದೇ ದಿನ ಫಲಿತಾಂಶ ಹೊರಬಿದ್ದಿದೆ’ ಎಂದು ಬರೆದಿದ್ದಾರೆ. ಅಮೆರಿಕದ ಮತದಾನ ಪ್ರಕ್ರಿಯೆಯು ‘ಭ್ರಷ್ಟ’ ಎಂದು ಆರೋಪಿಸುವ ಭರದಲ್ಲಿ ಅವರು ಈ ಪ್ರಮಾದ ಎಸಗಿದ್ದಾರೆ.