ಸಾರ್ವಜನಿಕ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸಲು ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಪ್ರಜಾಸೇವಾ ಪೋರ್ಟಲ್, 1902 ಸಹಾಯವಾಣಿ, ವಾಟ್ಸಾಪ್, ಸಾಮಾಜಿಕ ಜಾಲತಾಣ ಹಾಗೂ ಜನಸಭೆಗಳಲ್ಲಿ ಸಲ್ಲಿಕೆಯಾಗುವ ದೂರುಗಳು ಸಕಾಲ ಕಾಯ್ದೆಯ ವ್ಯಾಪ್ತಿಗೆ ಬರಲಿವೆ. ದೂರು ಇತ್ಯರ್ಥಕ್ಕೆ 21 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದ್ದು, ವಿಳಂಬಕ್ಕೆ ₹1,500 ದಂಡ ವಿಧಿಸಲಾಗುತ್ತದೆ. ಸುಳ್ಳು ದೂರು ನೀಡಿದರೆ ದೂರುದಾರರಿಗೂ ದಂಡ ಬೀಳಲಿದೆ. ಬೆಂಗಳೂರು, ನವೆಂಬರ್ 21: ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯೊಳಗೆ ಮತ್ತು ಗುಣಾತ್ಮಕವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ಸಾರ್ವಜನಿಕ ದೂರುಗಳನ್ನು ಸಕಾಲ ಕಾಯ್ದೆಯ ವ್ಯಾಪ್ತಿಗೆ ತಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.