ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅಮೆರಿಕ ನಿರ್ಮಿತ ಗೋ-ಪ್ರೊ ಕ್ಯಾಮೆರಾದ ಕುರಿತು ಮಾಹಿತಿ ಕೋರಿ ಭಾರತ ಸಲ್ಲಿಸಿರುವ ಮನವಿಗೆ ಚೀನಾ ಇನ್ನೂ ಪ್ರತಿಕ್ರಿಯಿಸಿಲ್ಲ. 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ಈ ಗೋ-ಪ್ರೊ ಕ್ಯಾಮೆರಾ ನಿರ್ಣಾಯಕ ಸಾಕ್ಷಿಯಾಗಿ ಹೊರಹೊಮ್ಮಿದೆ. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ತನಿಖೆಯ ಸಮಯದಲ್ಲಿ, ಸಾಧನದ ಮೂಲ ಮತ್ತು ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ಎನ್ಐಎ ಅಮೆರಿಕ ಮೂಲದ ತಯಾರಿಕಾ ಸಂಸ್ಥೆ ಗೋ-ಪ್ರೊ ಅನ್ನು ಸಂಪರ್ಕಿಸಿತ್ತು.