ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಗೃಹಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕಾಡಾನೆ ದಾಳಿಗೆ ರೈತ ಕೃಷ್ಣಮೂರ್ತಿ ಬಲಿಯಾಗಿದ್ದಾರೆ. ಮತ್ತೊಂದೆಡೆ ಭದ್ರಾ ಅಭಯಾರಣ್ಯಕ್ಕೆ ಆನೆ ಸ್ಥಳಾಂತರ ವಿರೋಧಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದು, ನ.25ರವರೆಗೆ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡುವುದಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಚಿಕ್ಕಮಗಳೂರು, ನವೆಂಬರ್ 19: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶದ ಕಟ್ಟೆ ಒಡೆದಿದೆ. ಮೃತರನ್ನು ಕೃಷ್ಣಮೂರ್ತಿ(45) ಎಂದು ಗುರುತಿಸಲಾಗಿದ್ದು, 18 ದಿನಗಳ ಹಿಂದೆಯಷ್ಟೇ ಇವರ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.