ಕಿರುತೆರೆಯಲ್ಲಿ ಹೆಸರು ಮಾಡಿರುವ ಶಮಂತ್ ಬ್ರೋ ಗೌಡ ಅವರು ಈಗ ಜಾನಪದ ಹಾರರ್ ಕಥಾಹಂದರದ ‘ಕದ್ರಿ’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಈ ಸಿನಿಮಾಗೆ ಎಂ. ಆನಂದ್ ರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಗೆ ‘ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ’ ಎಂಬ ಟ್ಯಾಗ್ ಲೈನ್ ಇದೆ. ನಟ ಶಮಂತ್ ಬ್ರೋ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೂಲಕ ಖ್ಯಾತಿ ಪಡೆದಿದ್ದರು. ‘ಲಕ್ಷ್ಮೀ ಬಾರಮ್ಮ’, ʻಅಗ್ನಿಸಾಕ್ಷಿ’ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಅವರು ಹೆಚ್ಚು ಪರಿಚಿತರಾದರು. ಶಮಂತ್ ಬ್ರೋ ಗೌಡ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ.