ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಲಿಂಗಸೂಗೂರು ತಾಲ್ಲೂಕಿನ ಮಟ್ಟೂರು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಯಲ್ಲೇ ಅನ್ನ ತಿಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮಾನ್ವಿ ತಾಲ್ಲೂಕಿನಲ್ಲೂ ಇದೇ ಸಮಸ್ಯೆ ಇದ್ದು, ಹಳ್ಳಗಳಿಗೆ ನೀರು ಬಿಡಲು ಒತ್ತಾಯಿಸುತ್ತಿದ್ದಾರೆ. ರಾಯಚೂರು, ನವೆಂಬರ್ 15: ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರು ಕೊಡಿ ಸ್ವಾಮಿ ಅಂತ ಗ್ರಾಮದ ಜನ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲೇ ಊಟ ಮಾಡುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.