ಗುವಾಹಟಿ: ರಸ್ತೆ ಅಪಘಾತವೊಂದರಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಇದೇ ಭೀಕರ ಅಪಘಾತದಲ್ಲಿ ಕೇವಲ ಎರಡು ವರ್ಷದ ಪುಟ್ಟ ಬಾಲಕನೊಬ್ಬ ಬದುಕುಳಿದಿ. ಅಚ್ಚರಿಯ ಸಂಗತಿಯೆಂದರೆ, ಬದುಕುಳಿದ ಮಗುವಿನ ಪೋಷಕರು ಯಾರು ಎಂಬುದೇ ಇನ್ನೂ ಪತ್ತೆಯಾಗಿಲ್ಲ. ಸದ್ಯ ಈ ಪುಟ್ಟ ಕಂದನ ಮುಂದಿನ ಆರೈಕೆಯ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದಾರೆ.ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪದ ಗೋಲಾಘಾಟ್ ಜಿಲ್ಲೆಯ ರಂಗಾಜನ್ ಪ್ರದೇಶದಲ್ಲಿ ಶುಕ್ರವಾರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಹಾಗೂ ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲೇ ಹಲವರು ಮೃತಪಟ್ಟಿದ್ದಾರೆ.