ಮಕ್ಕಳು ಪ್ರತಿದಿನ ಚಾಕೊಲೇಟ್, ಸಿಹಿತಿಂಡಿ ಮತ್ತು ಪ್ಯಾಕೆಟ್ ಆಹಾರಗಳನ್ನು ಸೇವಿಸುತ್ತಿದ್ದಾರೆಯೇ? ಹಾಗಾದರೆ ಪೋಷಕರಾಗಿ ನೀವುಎಚ್ಚರ ವಹಿಸಬೇಕು. ಇಂತಹ ಆಹಾರಗಳ ಅತಿಯಾದ ಸೇವನೆಯಿಂದ ಮಕ್ಕಳಲ್ಲಿ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧದ ಅಪಾಯ ಹೆಚ್ಚಬಹುದು. ಕುತ್ತಿಗೆ, ಕಂಕುಳಿನ ಸುತ್ತ ಚರ್ಮ ಕಪ್ಪಾಗುವುದು, ಸುಸ್ತು ಮತ್ತು ಸೊಂಟದ ಸುತ್ತ ಕೊಬ್ಬು ಹೆಚ್ಚಾಗುವುದು ಕೆಲವು ಎಚ್ಚರಿಕೆಯ ಲಕ್ಷಣಗಳಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಚಯಾಪಚಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಆಹಾರ ಪದ್ಧತಿ, ಅತಿಯಾದ ಸಿಹಿತಿಂಡಿಗಳ ಸೇವನೆ, ಪ್ಯಾಕೆಟ್ ಆಹಾರಗಳ ಬಳಕೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.