ನಂದಮೂರಿ ಬಾಲಕೃಷ್ಣ ಅವರ ಪುತ್ರಿ ತೇಜಸ್ವಿನಿ ಅವರು ಇದೀಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಆದರೆ ನಾಯಕಿಯಾಗಿ ಅಲ್ಲ ಬದಲಿಗೆ ನಿರ್ಮಾಪಕಿ ಆಗಿ. ತೇಜಸ್ವಿನಿ ಅವರು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೇ ತೇಜಸ್ವಿನಿ ಅವರು ಸಿನಿಮಾ ರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ತೆಲುಗು ರಾಜ್ಯಗಳ ಸಿನಿಮಾ ಮತ್ತು ರಾಜಕೀಯದಲ್ಲಿ ನಂದಮೂರಿ ಕುಟುಂಬದ ಪ್ರಭಾವ ಬಲು ದೊಡ್ಡದು. ದಶಕಗಳಿಂದಲೂ ತೆಲುಗು ಸಿನಿಮಾ ಮತ್ತು ರಾಜಕೀಯದಲ್ಲಿ ಈ ಕುಟುಂಬದ ಸದಸ್ಯರು ಸಕ್ರಿಯರಾಗಿದ್ದಾರೆ. ಈ ಕುಟುಂಬದ ಮೂರನೇ ಜನರೇಷನ್ ಇದೀಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಾಲ್ಕನೇ ಜನರೇಷನ್ ಸಹ ಕೆಲವೇ ವರ್ಷಗಳಲ್ಲಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.