ವಾಹನ ಸವಾರರ ಜೀವ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮುಂದಾದ ನಟ ವಿನೋದ್ ರಾಜ್, ರಸ್ತೆಯ ಗುಂಡಿಗಳಿಗೆ ಸಿಮೆಂಟ್ ಮಿಶ್ರಿತ ಕಾಂಕ್ರೀಟ್ ಹಾಕಿ ಮುಚ್ಚುವ ಕೆಲಸವನ್ನು ತಾವೇ ನಿಂತು ನೆರವೇರಿಸಿದ್ದಾರೆ. ಸಾರ್ವಜನಿಕರ ಕಷ್ಟಕ್ಕೆ ಧ್ವನಿಯಾಗಿ, ಸ್ವತಃ ಶ್ರಮದಾನ ಮಾಡಿ ರಸ್ತೆ ಸರಿಪಡಿಸಿದ ನಟನ ಈ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಕಾರ್ಯಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೆಲಮಂಗಲದಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ತುಂಬಾ ಬಿದ್ದಿದ್ದ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿತ್ತು.