ಚಿಕ್ಕಮಗಳೂರು ತಾಲೂಕಿನ ಅರಸಿನಗುಪ್ಪೆ ದೇವೀರಮ್ಮ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆಯಂದು ಗರ್ಭಗುಡಿಯ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಶತಮಾನಗಳಿಂದಲೂ ನಡೆಯುತ್ತಿರುವ ಈ ಪವಾಡವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಧುನಿಕ ಯುಗದಲ್ಲೂ ದೇವಿ ಪವಾಡ ಮಾಡುತ್ತಿದ್ದಾಳೆ ಎಂದು ಲಕ್ಷಾಂತರ ಭಕ್ತರು ಅಚಲವಾಗಿ ನಂಬಿದ್ದಾರೆ. ಇಂದಿನ ವೈಜ್ಞಾನಿಕ ಕಾಲದಲ್ಲೂ ಇಂತಹ ಪವಾಡಗಳನ್ನು ನೋಡುವುದು ಸಾಧ್ಯವೇ ಎಂಬ ಪ್ರಶ್ನೆಗಳಿಗೆ ಅರಸಿನಗುಪ್ಪೆಯ ಈ ಘಟನೆ ಉತ್ತರ ನೀಡುತ್ತದೆ. ಚಿಕ್ಕಮಗಳೂರು, ನವೆಂಬರ್ 11: ತಾಲೂಕಿನ ಅರಸಿನಗುಪ್ಪೆ ಗ್ರಾಮದಲ್ಲಿರುವ ಪ್ರಸಿದ್ಧ ದೇವೀರಮ್ಮ ದೇವಾಲಯದಲ್ಲಿ ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯಂದು ಒಂದು ಅಚ್ಚರಿಯ ಘಟನೆ ನಡೆಯುತ್ತದೆ. ಮಂತ್ರ ಘೋಷಗಳು ಮೊಳಗುತ್ತಿದ್ದಂತೆ ದೇವಸ್ಥಾನದ ಗರ್ಭಗುಡಿಯ ಮರದ ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ.