ಮುಂಬೈ: ಬರೋಬ್ಬರಿ 2,575.83 ಕೋಟಿ ಮೌಲ್ಯದ ವಿದೇಶಿ ಹಣ ವರ್ಗಾವಣೆ ವಂಚನೆ ಪ್ರಕರಣದಲ್ಲಿ 82 ವರ್ಷದ ಚಾರ್ಟರ್ಡ್ ಅಕೌಂಟೆಂಟ್ಗೆ ಮುಂಬೈ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಬೆಂ. ಬೆಂಗಳೂರಿನ ನಿವಾಸಿ ಸೀತಾರಾಮ್ ಭಟ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಐದು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಅನುಭವ ಹೊಂದಿರುವುದಾಗಿ ವಾದಿಸಿದ್ದ ಸೀತಾರಾಮ್ ಭಟ್, ತಮ್ಮ ವಯಸ್ಸು 82 ವರ್ಷವಾಗಿದ್ದು, ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ತಮ್ಮ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಗುರುತಿನ ಚೀಟಿ ಸೃಷ್ಟಿಸಿದ್ದಾರೆ. ಸಿಬ್ಬಂದಿಯ ಮೇಲ್ವಿಚಾರಣೆ ಮಾಡದಿರುವುದಷ್ಟೇ ತಮ್ಮ ತಪ್ಪು ಎಂದು ಅವರು ವಾದಿಸಿದ್ದರು. ಈ ಕುರಿತು ಅಂಧೇರಿ ಪೊಲೀಸರಿಗೂ ದೂರು ನೀಡಿರುವುದಾಗಿ ತಿಳಿಸಿದ್ದರು.