ಅತ್ತೆ ಇಂದಿರಾ ಗಾಂಧಿಯ ಭೀಕರ ಕೊಲೆಯ ನಂತರ ಪತಿ ರಾಜೀವ್ ಗಾಂಧಿ ಅವರು ರಾಜಕೀಯ ಪ್ರವೇಶಿಸಿದ ಕ್ಷಣದಿಂದ ಹಿಡಿದು, ಅವರ ಹತ್ಯೆಯಾಗುವವರೆಗಿನ ಆತಂಕದ ದಿನಗಳನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಬಿಚ್ಚಿಟ್ಟಿದ್ದಾರೆ. ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣಗಳನ್ನು ಸ್ಮರಿಸಿದ ಸೋನಿಯಾ ಗಾಂಧಿ, "ಇಂದಿರಾ ಗಾಂಧಿಯವರ ಕೊಲೆಯ ನಂತರ ರಾಜೀವ್ ಗಾಂಧಿ ರಾಜಕೀಯಕ್ಕೆ ಬರುವುದು ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅವರನ್ನು ಸಹ ಕೊಲೆ ಮಾಡಲಾಗುತ್ತದೆ ಎಂಬ ಭಯ ನನ್ನನ್ನು ಪ್ರತಿಯೊಂದು ಕ್ಷಣವೂ ಕಾಡುತ್ತಿತ್ತು. ಮುಂದಿನ ಸರದಿ ಆತನದೇ ಎಂಬುದು ನನ್ನ ಆತಂಕವಾಗಿತ್ತು" ಎಂದು ಹೇಳಿದ್ದಾರೆ.