ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. "ಸಾರ್ವಜನಿಕರ ಮನೋಭಾವ ಹಾಗೂ ಮನಸ್ಥಿತಿ ಬದಲಾಗಲು ಸಮಯ ಹಿಡಿಯುತ್ತದೆ" ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಕೇವಲ ಆದೇಶಗಳನ್ನು ನೀಡುವುದಕ್ಕಿಂತ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದು ಪೂರ್ಣ ಪ್ರಮಾಣದ ಪರಿಹಾರವಲ್ಲ. ನಿಯಮಗಳನ್ನು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರದಿದ್ದರೆ ಆದೇಶಗಳು ಕೇವಲ 'ಹಾಸ್ಯಾಸ್ಪದ' ಆಗುತ್ತವೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.